ಸ್ವಾಮಿ ವಿವೇಕಾನಂದ (ಕುವೆಂಪು) / Swami Vivekananda (Kuvempu)

Kuvempu — 2020
Sign up to use
ನಮ್ಮ ಹೊಸ ಪ್ರಪಂಚದ ಪ್ರಶ್ನೆಗಳಿಗೆ ಉತ್ತರಕೊಟ್ಟು ಬಾಳುವಷ್ಟು ಜೀವಾಳವು ಪುರಾತನವಾದ ಹಿಂದೂಮತದಲ್ಲಿರುವುದೇ? ಪಾಶ್ಚಾತ್ಯರ ವಿದ್ಯೆ ಚಮತ್ಕಾರಗಳೆದುರಿಗೆ ತಲೆಯೆತ್ತಿ ನಿಲ್ಲುವಷ್ಟರ ಬೆನ್ನುಮೂಳೆಯು ಆ ಆರ್ಷ ಸಂಸ್ಕೃತಿಗಿರುವುದೆ? ತರಂಗ ತರಂಗವಾಗಿ ಬರುತ್ತಿರುವ ವೈಜ್ಞಾನಿಕ ಶಕ್ತಿಗಳ ಪ್ರವಾಹದಿಂದ ಮುಳುಗದೆ, ಕದಲದೆ ಉಳಿಯಲು ಬೇಕಾದ ಸತ್ವೋನ್ನತಿಯು ವೇದ ವೇದಾಂತಗಳಲ್ಲಿರುವುದೆ? ನಲವತ್ತು ವರ್ಷಗಳ ಹಿಂದೆ ಪ್ರಪಂಚವು ಈ ಪ್ರಶ್ನೆಯನ್ನು ಕೇಳುತ್ತಿತ್ತು, ಹಿಂದೂ ಲೋಕವೂ ಕೇಳುತ್ತಿತ್ತು. ಆಗ ಆ ಪ್ರಶ್ನೆಯನ್ನು ಧೈರ್ಯದಿಂದ ದಿಟ್ಟಿಸಿ ನೋಡಿ ಅದಕ್ಕೆ ಹೌದು, ಉಂಟು ಎಂದು ಘಂಟಾಘೋಷವಾಗಿ ಪ್ರಪಂಚವೆಲ್ಲವೂ ಕೇಳುವಂತೆ ಪ್ರತ್ಯುತ್ತರ ಕೊಡಲು ಶ್ರೀ ವಿವೇಕಾನಂದ ಸ್ವಾಮಿಗಳವರು ಎದ್ದು ನಿಲ್ಲದೆ ಹೋಗಿದ್ದರೆ, ಹಿಂದೂ ಸಮಾಜವು ಇಂದು ಈಗಿನಷ್ಟಾದರೂ ನೂತನ ಚೇತನವನ್ನು ತೋರುವುದಕ್ಕೆ ಪ್ರತಿಯಾಗಿ ಮತ್ತಷ್ಟು ಕಳೆಗುಂದಿರುತ್ತಿತ್ತೆಂಬುದಕ್ಕೆ ಸಂಶಯವಿಲ್ಲ. ಲೋಕದಲ್ಲಿ ಯಾರ ಬಲವೂ—ಒಂದು ಪ್ರಾಣಿಯದೇ ಆಗಲಿ, ಒಂದು ಸಮಾಜದ್ದೇ ಆಗಲಿ—ಒಂದು ಕ್ಷಣವಿದ್ದಂತೆ ಮರುಕ್ಷಣವಿರಲಾರದು. ಬಲವು ಹೆಚ್ಚುತ್ತಿರಬೇಕು, ಇಲ್ಲವೆ ತಗ್ಗುತ್ತಿರಬೇಕು. ವಿವೇಕಾನಂದರ ಕಾಲಕ್ಕೆ ಹಿಂದೆ ಒಂದು ಮಹಾಶಂಕೆ—ಒಂದು ಮರಣಭೀತಿ—ಹಿಂದೂ ಸಮಾಜದ ಎದೆಗೆ ತಟ್ಟಿತ್ತು. ಅವರು ಆ ಭಯಕ್ಕೆ ಕಾರಣವಿಲ್ಲವೆಂದು ಭರವಸೆ ತೋರಿ, ಸಮಾಜದ ಆತ್ಮಶ್ರದ್ಧೆಯನ್ನು ಮರಳಿ ಬದುಕಿಸಿ, ಅದರ ಬಲೋತ್ಕರ್ಷಕ್ಕೆ ದಾರಿಮಾಡಿ, ಅದರ ಆಯುರೇಖೆಯನ್ನು ವಿಸ್ತಾರಪಡಿಸಿದರು.#SRKAshramaMysore

Reviews

No reviews yet.
Be the first to write one.

Highlights

No highlights yet.
Be the first to share one.